ACT HUMOR

Sripada Studios understands that there is a need to understand the acting and humour of an actor.

ACT HUMOR

Sripada Studios understands that there is a need to understand the acting and humour of an actor.

ಹಾಸ್ಯವನ್ನು ಅಭಿನಯಿಸುವುದು ಅಷ್ಟು ಸುಲಭದ ಮಾತೇನಲ್ಲ.

ಹಾಸ್ಯನಟ ಬರಹಗಾರನ ಉದ್ದೇಶವನ್ನು, ನಿರ್ದೇಶಕನ ನಿರೀಕ್ಷೆಗಳನ್ನು, ಪ್ರೇಕ್ಷಕನ ಅಭಿರುಚಿಯನ್ನು,  ಅರ್ಥೈಸಿಕೊಂಡು, ತನ್ನಲ್ಲಿನ ಕಲಾತ್ಮಕತೆಯನ್ನು, ಕ್ರಿಯಾಶೀಲತೆಯನ್ನು ಅಳವಡಿಸಿಕೊಂಡು ಅಭಿನಯಿಸಿ, ನೋಡುಗನ ಮೊಗದಲ್ಲಿ ನಗುವನ್ನು ತರಿಸಬೇಕಾದ ಮಹತ್ತರ ಜವಾಬ್ದಾರಿಯನ್ನು ಹೊಂದಿರುತ್ತಾನೆ. 

ಹಾಸ್ಯವನ್ನು ಅಭಿನಯಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಅದಕ್ಕೆ ಬಹುಮುಖ್ಯವಾದ  ಸಮಯ (Timing), ನಗಿಸುವ ಸಾಲು (Punches), ವಿರಾಮ (Pause), ಧ್ವನಿ ಏರಿಳಿತಗಳು (Intonations), ಪಾತ್ರದ ಅರಿವು ಮತ್ತು ಪೋಷಣೆ (Understanding a character and it’s development) ಇಂತಹ ಸಂಗತಿಗಳ ಮೇಲೆ ಹಿಡಿತ ಸಾಧಿಸಿರಲೇಬೇಕು.

ಪಾತ್ರವೊಂದು ತಾನು ಸಿಲುಕಿರುವ ಸಂದರ್ಭ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುವ ರೀತಿ ನೋಡುಗನಲ್ಲಿ ನಗುವನ್ನು ತರಿಸಬೇಕು, ಇದನ್ನು ಬಿಟ್ಟು, ನಟನೊಬ್ಬ ಕಾರಣವೇ ಇಲ್ಲದೆ ತಮಾಷೆಯಾಗಿ ಆಡಿದರೆ ಅದು ಅಧಿಕಪ್ರಸಂಗತನವೆನಿಸಿ, ಹಾಸ್ಯದ ಮೂಲೋದ್ದೇಶವೇ  ಹಾಳಾಗಿ, ಅಭಿನಯಿಸಲು ಅವಕಾಶವೇ ಇಲ್ಲದಂತಾಗಿಬಿಡುತ್ತದೆ.

ಆದ್ದರಿಂದಲೇ ಹಾಸ್ಯ ಮತ್ತು ಹಾಸ್ಯಕಲಾವಿದನ ಅಭಿನಯವು ಸದಾ ಸಹಜವಾಗಿರಬೇಕು, ಸಹಜವಾಗಿದ್ದಷ್ಟು, ಪ್ರೇಕ್ಷಕರ ಮನಸ್ಸಿನಲ್ಲಿ ಬಹುಬೇಗವಿಳಿಯಲು, ಬಹುಕಾಲ ಉಳಿಯಲು ಸಾಧ್ಯ.

ಹಾಸ್ಯ ನಟರು ಮತ್ತು ಚಿತ್ರೋದ್ಯಮ : 

ಮೂಕಿ ಚಿತ್ರಗಳ ಕಾಲದಿಂದಲೂ ಹಾಸ್ಯಚಿತ್ರಗಳದ್ದೇ ಮೇಲುಗೈ. ಮ್ಯಾಕ್ಸ್ ಲಿಂಡರ್, ರಾಸ್ಕ್ ಆರ್ಬಲ್, ಚಾರ್ಲಿ ಚಾಪ್ಲಿನ್, ಬಸ್ಟರ್ ಕೀಟನ್ ಮುಂತಾದ ಹಾಸ್ಯನಟರು ತಾವೇ ನಟಿಸಿ, ನಿರ್ದೇಶಿಸಿ, ನಿರ್ಮಿಸುತ್ತಿದ್ದ ದೃಶ್ಯ ಹಾಸ್ಯ(Visual Comedy) ಮತ್ತು ಆಂಗಿಕ ಹಾಸ್ಯದ ಚಿತ್ರಗಳು ಅತ್ಯಂತ ಬೇಡಿಕೆಯಲ್ಲಿದ್ದವು. 

ಈ ಚಿತ್ರಗಳ ಮೂಲಕ ಚಿತ್ರೋದ್ಯಮವು ಆರ್ಥಿಕವಾಗಿ, ತಾಂತ್ರಿಕವಾಗಿ ತನ್ನ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು, ತನ್ನ ಬೆಳವಣಿಗೆಯ ಗತಿಯನ್ನೇ ಬದಲಿಸಿಕೊಂಡು ಮುನ್ನೆಡೆದುದಕ್ಕೆ ಇಂತಹ ಹಾಸ್ಯನಟರ ಕೊಡುಗೆ ಅಪಾರವಾದದ್ದು.

ವಿಶ್ವದ ಕಿರುತೆರೆ ಇತಿಹಾಸದಲ್ಲಿಯೇ ಅತ್ಯಂತ ಜನಪ್ರಿಯ ಪಾತ್ರವಾದ ‘ಮಿಸ್ಟರ್ ಬೀನ್’ (Mr.Bean) ನ ಸೃಷ್ಠಿಕರ್ತ ‘ರೋವನ್ ಆಟ್ಕಿನ್ಸನ್ ಅನ್ನು’ ಶ್ಲಾಘಿಸಿದರಲು ಹೇಗೆ ಸಾಧ್ಯ ?

ಜಗತ್ತಿಗೆಲ್ಲ ಚಿರಪರಿಚಿತನಾಗಿರುವ, ಸಾಹಸ ಕಲಾವಿದರ ಪಾಲಿನ ಆರಾಧ್ಯ ದೈವ ‘ಜಾಕಿ ಚಾನ್’ ನ ಯಶಸ್ಸಿನ ಹಿಂದಿರುವುದೂ ಆಕ್ಷನ್ ಕಾಮಿಡಿ ಚಿತ್ರಗಳೇ ಅಲ್ಲವೇ ?

ಹೀಗೆ ಆಯಾ ಚಿತ್ರರಂಗದ ಹಾಸ್ಯತಾರೆ ಗಳು ಅಂದಿನಿಂದ ಇಂದಿನವರೆಗೂ ಚಿತ್ರಗಳ ಯಶಸ್ಸಿಗೆ, ಚಿತ್ರರಂಗದ ಬೆಳವಣಿಗೆಗೆ ತಮ್ಮ ಅದ್ಭುತ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.

ಹಾಸ್ಯನಟನಿಗಿರುವ ಅನುಕೂಲ ಮತ್ತು ಅನಾನುಕೂಲಗಳು : 

  • ಹಾಸ್ಯನಟರಿಗೆ ಯಾವಾಗಲೂ ಸೀಮಿತ ಪರದೆಯ ಸ್ಥಳ (Limited Screen Space)ವಿದ್ದು ಈ ಅಲ್ಪ ಸಮಯದಲ್ಲೇ, ಆತ ಪ್ರೇಕ್ಷಕನನ್ನು ಮುಟ್ಟಬೇಕು. 
  • ಹಾಸ್ಯದ ಮೂಲಕ ಎಂತಹ ಗಂಭೀರ ವಿಷಯಗಳನ್ನಾದರೂ ಪ್ರಸ್ತುತ ಪಡಿಸಬಹುದು, ಆದರೆ ಆ ಅದ್ಭುತ ವಿಚಾರಗಳು ಹಾಸ್ಯವೆಂದಷ್ಟೇ ಪರಿಗಣಿಸಲ್ಪಟ್ಟು ನೋಡುಗನ ಮನಸ್ಸಿಗೆ ಇಳಿಯದೆ, ತೇಲಿ ಹೋಗುವ ಸಂಭವವೂ ಹೆಚ್ಚು.
  • ಸಿನಿಮಾ ಮತ್ತು ಟಿವಿಗಳಲ್ಲಿ ರಂಗಭೂಮಿಯಲ್ಲಿನ ಹಾಗೆ ಉತ್ಪ್ರೇಕ್ಷೆ (Exaggerate)ಯ ಅವಶ್ಯಕತೆ ಇರುವುದಿಲ್ಲ, ಆದರೆ ಹಾಸ್ಯನಟನಿಗೆ ಮಾತ್ರ ಉತ್ಪ್ರೇಕ್ಷೆಗೊಳಿಸುವ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಸ್ವಾತಂತ್ರ್ಯವೇ ಇದೆ ಎನ್ನಬಹುದು.
  • ಹಾಸ್ಯನಟನೊಬ್ಬ ತನ್ನ ಪಾತ್ರದ ಮೂಲಕ ಅಭಿನಯಿಸುವ ಯಾವುದೇ ರಸವೂ ಸಹ ಪ್ರೇಕ್ಷಕನಲ್ಲಿ ನಗುವನ್ನು ತರಿಸಬಹುದು.
  • ಇಂದಿಗೂ ನಾವು ಈಗಾಗಲೇ ನೋಡಿರುವ ಹಾಸ್ಯ ಸನ್ನಿವೇಶಗಳನ್ನು ನೋಡುತ್ತಾ ಮತ್ತೆ ಮತ್ತೆ ಕಣ್ಣಿನಲ್ಲಿ ನೀರುಬರುವಷ್ಟು ನಗುತ್ತೇವೆ ಎಂದರೆ ಅದು ಹಾಸ್ಯ ನಟ ತನಗೆ ಸಿಕ್ಕ ಅಲ್ಪ ಪರದೆಯ ಅವಧಿಯಲ್ಲಿ (Screen Time) ಯಲ್ಲಿ ತನ್ನನ್ನು ತಾನು ನಿರೂಪಿಸಿ ಕೊಂಡಿದ್ದರ ಪ್ರತಿಫಲವೇ ಹೌದು.

ಹಾಸ್ಯನಟರೇಕೆ ಬಹುಭಾಷಾ ತಾರೆಯಾಗುವಿದಿಲ್ಲ? 

ಕಲೆಗೆ ಭಾಷೆ ಮುಖ್ಯವಲ್ಲ, ಕಲಾವಿದನೊಬ್ಬ ಯಾವ ಭಾಷೆ ಯಲ್ಲಾದರೂ ನಟಿಸಿ, ಬಹುಭಾಷಾ ತಾರೆಯಾಗಿ ಬೆಳೆಯಬಹುದು. ಅದು ಕಲಾವಿದನ ಪ್ರತಿಭೆ ಮತ್ತು ಕಲೆಗಿರುವ ಶಕ್ತಿ.

ಆದರೆ, ಈ ವಿಷಯದಲ್ಲಿ, ಹಾಸ್ಯನಟ ದುರಾದೃಷ್ಟವಂತನೂ ಹೌದು ಮತ್ತು ಅದೃಷ್ಟವಂತನೂ ಹೌದು.

ಯಾಕೆಂದರೆ ಹಾಸ್ಯ ನಟನೊಬ್ಬ ಅನ್ಯಭಾಷೆಗಳಲ್ಲಿ ನಟಿಸಿ ಯಶಸ್ವಿಯಾಗಿ ಉಳಿದಿದ್ದು ತೀರಾ ಕಡಿಮೆ. ಇನ್ನು ಪಂಚಭಾಷಾ ತಾರೆಯಾಗುವ ಮಾತು ಕನಸೇ ಸರಿ.

ಹಾಸ್ಯಕ್ಕೆ ನ್ಯಾಯ ಒದಗಿಸಬೇಕಾದರೆ ಅಭಿನಯಿಸುತ್ತಿರುವ ಭಾಷೆ, ಪಾತ್ರದ ಹಿನ್ನೆಲೆ, ಪಾತ್ರದ ಮೇಲೆ ಪ್ರಭಾವ ಬೀರುವ ಸ್ಥಳೀಯತೆ ಗಳ ಕುರಿತು ಹೆಚ್ಚಿನ ಜ್ಞಾನ ಅತ್ಯಗತ್ಯ.

ಹಾಸ್ಯನಟನ ಆಂಗಿಕ ಮತ್ತು ವಾಚಿಕಾಭಿನಯಗಳು ಒಂದಕ್ಕೊಂದು ಹೊಂದಿಕೊಳ್ಳದಿದ್ದರೆ ನೋಡುಗನಲ್ಲಿ ನಗುವನ್ನು ತರಿಸದೆ, ನೀರಸ ಪ್ರತಿಕ್ರಿಯೆಗೆ ಪಾತ್ರವಾಗಬೇಕಾಗುತ್ತದೆ.

ಪ್ರೇಕ್ಷಕರು ಎಂದಿಗೂ ಹಾಸ್ಯ ನಟನನ್ನು ತಮ್ಮಂತೆಯೇ ಇರುವ ಸಾಮಾನ್ಯನೆಂದು, ತಮ್ಮವನೆ ಅವನೆಂದು ಅತ್ಯಂತ ಹತ್ತಿರವಾಗಿಸಿಕೊಂಡುಬಿಡುತ್ತಾರೆ.

ಇಂತಹ ಅದೃಷ್ಟ ಎಲ್ಲರಿಗೂ ಸಿಗುವುದು ಅಪರೂಪ. ಪರಭಾಷಾ ಕಲಾವಿದನೊಬ್ಬ ತಮ್ಮ ಭಾಷೆಯಲ್ಲಿ ನಟಿಸಿದಾಗ ಅವರು ಇದೇ ಭಾವದಲ್ಲಿ ಸ್ವೀಕರಿಸಲಾರರೇನೋ ?

ಒಟ್ಟಾರೆಯಾಗಿ ಹಾಸ್ಯದ ನಟನೆ ಮತ್ತು ಹಾಸ್ಯನಟರ ಜೀವನ ಹೊರಗಿನಿಂದ ಕಾಣುವಷ್ಟು ಸುಲಭವಲ್ಲ, ಹಾಸ್ಯ ನಟರೂ ಸಹ ತಮ್ಮ ವೃತ್ತಿಯಲ್ಲಿ ಹಲವು ಏಳುಬೀಳುಗಳಿಗೆ, ಸ್ಪರ್ಧೆಗಳಿಗೆ, ಕೆಲಸವೇ ಇಲ್ಲದ ದಿನಗಳಿಗೆ ಸಾಕ್ಷಿಯಾಗಲೇಬೇಕಾಗುತ್ತದೆ.

“Even a great actor cannot save a bad script”  ಎಂಬ ಮಾತು ಖಂಡಿತ ನಿಜ, ಆದರೆ  “A good comedian can always save the audience from a bad movie experience”

– ರಾಜ್ ಆರಾಧ್ಯ

Leave a Reply

Your email address will not be published. Required fields are marked *